ನತಿ ಕಾಂತೀಯ -
	ಭೂಮೇಲ್ಮೈಯ ಯಾವುದೇ ಸ್ಥಳದಲ್ಲಿ ಭೂಕಾಂತ ಕ್ಷೇತ್ರವನ್ನು ನಮೂದಿಸಲು ಸಾಮಾನ್ಯವಾಗಿ ಆಯ್ಕೆ ಮಾಡಿರುವ ಮೂರು ಕಾಂತೀಯ ಧಾತುಗಳ (ಮ್ಯಾಗ್ನೆಟಿಕ್ ಎಲಿಮೆಂಟ್ಸ್) ಪೈಕಿ ಒಂದು (ಮ್ಯಾಗ್ನೆಟಿಕ್ ಡಿಪ್). ಇತರ ಎರಡು ಧಾತುಗಳೆಂದರೆ ದಿಕ್ಪಾತ (ಡೆಕ್ಲಿನೇಷನ್) ಮತ್ತು ಕ್ಷಿತಿಜೀಯ ತೀವ್ರತೆ (ಹಾರಿಜಾಂಟಲ್ ಇಂಟೆನ್ಸಿಟಿ). ಕಾಂತೀಯ, ಸೂಜಿಯನ್ನು, ಅದರ ಗುರುತ್ವಕೇಂದ್ರದಲ್ಲಿ ರೇಷ್ಮೆನೂಲಿನಿಂದ ನೇತುಬಿಟ್ಟಾಗ, ಅದರ ಕಾಂತೀಯ ಅಕ್ಷ ಸೂಜಿಯ ಆಧಾರಬಿಂದುವಿನ ಮೂಲಕ ಸಾಗುವ ಕ್ಷಿತಿಜೀಯದೊಂದಿಗೆ ರಚಿಸುವ ಕೋನವೇ  ಆ ಸ್ಥಳದ ನತಿ. ಸೂಜಿಯ ಕಾಂತೀಯ ಅಕ್ಷ ತಳೆಯುವ ದಿಶೆಯೇ ಆ ಸ್ಥಳದಲ್ಲಿನ ಭೂಮಿಯ ಒಟ್ಟು ಕಾಂತೀಯ ತೀವ್ರತೆಯ ದಿಶೆಯನ್ನು ಸೂಚಿಸುವುದು.

	ನತಿವೃತ್ತ, ಕಾಂತೀಯ : ಯಾವುದೇ ಸ್ಥಳದಲ್ಲಿ ಕಾಂತೀಯ ನತಿಯನ್ನು ಅಳೆಯಲು ಬಳಸುವ ಉಪಕರಣ (ಮ್ಯಾಗ್ನೆಟಿಕ್ ಡಿಪ್ ಸರ್ಕಲ್). ಕ್ಷಿತಿಜೀಯ ಅಚ್ಚಿನ ಮೇಲೆ ಆಧರಿಸಿರುವ ಕಾಂತೀಯ ಸೂಜಿಯನ್ನು ಉಪಯೋಗಿಸಿಕೊಂಡು ಊಧ್ರ್ವ ವೃತ್ತವೊಂದರ ಎದುರು ಉಂಟಾಗುವ ಕೋನವನ್ನು ಅಳೆಯುವುದರಿಂದ ನತಿಯ ಮೌಲ್ಯ ದೊರೆಯುತ್ತದೆ. ಉಪಕರಣದ ವಿವರಗಳಿಷ್ಟು: ಅಗೆಟಿನಿಂದ ಮಾಡಿದ ಎರಡು ಚೂರಿ ಅಲಗುಗಳ ಮೇಲೆ ಕ್ಷಿತಿಜೀಯವಾಗಿ ಮಡಗಿರುವ ಅಚ್ಚು ಇದೆ. ಇದರ ಮೇಲೆ ಸಜ್ಜುಗೊಂಡಿರುವ ಕಾಂತೀಯ ಸೂಜಿ (ಂಃ) ಇಲ್ಲಿನ ಪ್ರಧಾನ ಘಟಕ. ಈ ಸೂಜಿ ಊಧ್ರ್ವ ವೃತ್ತವೊಂದರ (S) ತಲದ ಎದುರು (ಈ ವೃತ್ತವನ್ನು ಊಧ್ರ್ವದಿಶೆಯಲ್ಲಿ 900-900 ವರೆಗೂ ಕ್ಷಿತಿಜೀಯವಾಗಿ 00-00ವರೆಗೂ ಕ್ರಮಾಂಕಿಸಲಾಗಿರುತ್ತದೆ) ಆವರ್ತಿಸಬಲ್ಲದು. ಸೂಜಿಯನ್ನೂ ವೃತ್ತವನ್ನೂ ಗಾಜಿನ ಪೆಟ್ಟಿಗೆಯಲ್ಲಿ (ಆ) ಅಳವಡಿಸಿರುತ್ತಾರೆ. ಪೆಟ್ಟಿಗೆಯನ್ನು ಊಧ್ರ್ವಾಕ್ಷದ ಸುತ್ತಲೂ ಆವರ್ತಿಸಬಹುದು. ಪೆಟ್ಟಿಗೆಯ ಕೆಳಗೆ ಒಂದು ತೋರುಮುಳ್ಳು (P) ಇದೆ. ಕ್ರಮಾಂಕಿಸಲಾಗಿರುವ ಹಾಗೂ ಕ್ಷಿತಿಜೀಯವಾಗಿ ಹೊಂದಿಸಿರುವ ಒಂದು ವೃತ್ತದ ಎದುರು ಅದು ಚಲಿಸುತ್ತದೆ. ತೋರುಮುಳ್ಳಿನ ಚಲನೆಯ ಆಳವೇ ಪೆಟ್ಟಿಗೆ ಆವರ್ತಿಸುವ ಕೋನದ ಆಳವಾಗುತ್ತದೆ. ಕಾಂತೀಯ ಸೂಜಿ, ಅಚ್ಚು, ಗಾಜಿನ ಪೆಟ್ಟಿಗೆ, ಕ್ಷಿತಿಜೀಯ ವೃತ್ತ-ಇವೆಲ್ಲವನ್ನೂ ಮಟ್ಟಸಗೊಳಿಸಬಲ್ಲ ಮೂರು ತಿರುಪುಗಳ ಮೇಲೆ ಆಧರಿಸಿರಲಾಗಿದೆ. ರಸಮಟ್ಟವನ್ನು ಉಪಯೋಗಿಸಿ ಇಡೀ ಉಪಕರಣ ಕ್ಷಿತಿಜೀಯ ತಲದಲ್ಲಿ ನೆಲೆಗೊಳ್ಳುವಂತೆ ಮಾಡಬಹುದು.

	ಮೊದಲಿಗೆ ಉಪಕರಣ ಕ್ಷಿತಿಜೀಯ ತಲದಲ್ಲಿರುವಂತೆ ಮಾಡಿಕೊಂಡು ಅನಂತರ ಕಾಂತೀಯ ಸೂಜಿ ಊಧ್ರ್ವನೇರದಲ್ಲಿ (ಅಂದರೆ ಅದು ಊಧ್ರ್ವಮಾನಕದ 90º-90ºಯನ್ನು ಸೂಚಿಸುತ್ತಿರಬೇಕು) ನಿಲ್ಲುವ ತನಕವೂ ಗಾಜಿನ ಪೆಟ್ಟಿಗೆಯನ್ನು ತಿರುಗಿಸಬೇಕು. ಈ ಸ್ಥಾನದಲ್ಲಿ ಭೂಕಾಂತಕ್ಷೇತ್ರದ ಊಧ್ರ್ವ ಘಟಕ (ವರ್ಟಿಕಲ್ ಕಾಂಪೊನೆಂಟ್) ಮಾತ್ರ ಸೂಜಿಯ ಮೇಲೆ ಪ್ರಯುಕ್ತವಾಗಿರುತ್ತದೆ. ಹೀಗಾದಾಗ ಸೂಜಿಯ ತಲ ಕಾಂತೀಯ ಯಾಮ್ಯೋತ್ತರಕ್ಕೆ ಲಂಬಕೋನದಲ್ಲಿರುವುದು. ಕ್ಷಿತಿಜೀಯ ವೃತ್ತದ (ಇ) ಎದುರು ತೋರುಮುಳ್ಳಿನ (P) ಸ್ಥಾನವನ್ನು ಗುರುತಿಸಿಕೊಂಡು ಅನಂತರ ಗಾಜಿನ ಪೆಟ್ಟಿಗೆಯನ್ನು (ಃ) ಮತ್ತೆ 90 ಡಿಗ್ರಿಗಳಷ್ಟು ಆವರ್ತಿಸಬೇಕು. ಈ ಸಂದರ್ಭದಲ್ಲಿ ಊಧ್ರ್ವವೃತ್ತದ (S) ತಲ ಕಾಂತೀಯ ಯಾಮ್ಯೋತ್ತರದ ನೇರದಲ್ಲೇ ಇರುವುದಲ್ಲದೆ ಭೂಮಿಯ ಫಲಿತ ಕಾಂತೀಯ ಕ್ಷೇತ್ರದ ನೇರವನ್ನೂ ಸೂಚಿಸುತ್ತದೆ. ಊಧ್ರ್ವವೃತ್ತದ (S) ಎದುರು ಕಾಂತೀಯ ಸೂಜಿಯ ಅಕ್ಷ ಈಗ ರಚಿಸುವ ಕೋನವೇ ಆ ಸ್ಥಳದ ನತಿಯ ಅಳವು.

	ಈ ಉಪಕರಣವನ್ನು ಬಳಸಿ ಪಡೆಯುವ ವಾಚನಗಳು ಅಷ್ಟಾಗಿ ನಿಖರವಾಗಿರದಿರುವುದಕ್ಕೆ ಉತ್ಕೇಂದ್ರತಾ ದೋಷ, ಸೊನ್ನೆ ಸೊನ್ನೆ ರೇಖೆಯ ದೋಷ, ಕಾಂತೀಯ ಅಕ್ಷದ ದೋಷ, ಗುರುತ್ವಕೇಂದ್ರದ ದೋಷ-ಹೀಗೆ ವಿವಿಧ ದೋಷಗಳು ಕಾರಣ. ಇವನ್ನು ಹೋಗಲಾಡಿಸಲು ಸಾಮಾನ್ಯವಾಗಿ ಹದಿನಾರು ವಾಚನಗಳನ್ನು ತೆಗೆದುಕೊಳ್ಳುವುದುಂಟು. ಇವುಗಳ ಸರಾಸರಿಯೇ ನತಿಯ ಬೆಲೆ.
(ಎಚ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ